ಫೋನ್ ಕರೆ ಸ್ವೀಕರಿಸಲಿಲ್ಲವೆಂದು ಪತ್ನಿ ಹತ್ಯೆಗೈದು ಆಕಸ್ಮಿಕ ಸಾವಿನಂತೆ ಬಿಂಬಿಸಲು ಯತ್ನ: ಪತಿಯ ಬಂಧನ

ಫೋನ್ ಕರೆ ಸ್ವೀಕರಿಸುವುದಿಲ್ಲ ಎಂಬ ಕಾರಣಕ್ಕೆ ಪತಿಯೇ ಪತ್ನಿಯನ್ನು ಕೊಲೆಗೈದ ಘಟನೆ ಬಿಳೇಕಹಳ್ಳಿಯಲ್ಲಿ ನಡೆದಿದೆ.

ಸ್ನೇಹಜೀವಿ ನ್ಯೂಸ್

​ಬೆಂಗಳೂರು: ಫೋನ್ ಕರೆ ಸ್ವೀಕರಿಸುವುದಿಲ್ಲ ಎಂಬ ಕಾರಣಕ್ಕೆ ದಂಪತಿ ನಡುವೆ ಆರಂಭವಾದ ಜಗಳವೊಂದು ಭೀಕರ ಹತ್ಯೆಯಲ್ಲಿ ಅಂತ್ಯವಾದ ಆಘಾತಕಾರಿ ಘಟನೆ ಗುರುವಾರ ಬೆಳಗ್ಗೆ ಬಿಳೇಕಹಳ್ಳಿಯಲ್ಲಿ ನಡೆದಿದೆ.

ಗುಂಜಾ ಮದೇಷಿಯಾ (38) ಪತಿಯಿಂದಲೇ ಹತ್ಯೆಯಾದ ದುರ್ದೈವಿ. ಸೀರೆಯಿಂದ ಕತ್ತು ಹಿಸುಕಿ ಪತ್ನಿಯನ್ನ ಹತ್ಯೆ ಮಾಡಿದ ಬಳಿಕ ಪೊಲೀಸರಿಗೆ ಅನುಮಾನ ಬಾರದಂತೆ ಮೃತದೇಹವನ್ನ ವಿರೂಪಗೊಳಿಸಲು ಯತ್ನಿಸಿದ್ದ ರಂಜಿತ್ ಕುಮಾರ್‌ ಗುಪ್ತಾನನ್ನ ಬಂಧಿಸಿರುವುದಾಗಿ ಮೈಕೋ ಲೇಔಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮೂಲತಃ ಬಿಹಾರದವರಾದ ರಂಜಿತ್ ಕುಮಾರ್ ಗುಪ್ತಾ ಹಾಗೂ ಗುಂಜಾ ಮದೇಷಿಯಾ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಬಿಳೇಕಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ರಂಜಿತ್ ಕೆಲಸಕ್ಕೆ ತೆರಳಿದರೆ, ಪತ್ನಿ ಗುಂಜಾ ಮನೆಯಲ್ಲೇ ಇರುತ್ತಿದ್ದರು. ಆದರೆ ಇತ್ತೀಚೆಗೆ ರಂಜಿತ್ ಕೆಲಸದ ನಡುವೆ ಕರೆ ಮಾಡಿದಾಗ ಪತ್ನಿ ಫೋನ್ ರಿಸೀವ್ ಮಾಡುತ್ತಿರಲಿಲ್ಲ ಹಾಗೂ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ತೀವ್ರ ಗಲಾಟೆ ನಡೆಯುತ್ತಿತ್ತು.

ನಿನ್ನೆ ಬೆಳಗ್ಗೆ ಮಕ್ಕಳು ಶಾಲೆಗೆ ಹೋದ ನಂತರ, ಫೋನ್ ಕರೆಯ ವಿಚಾರವಾಗಿ ದಂಪತಿ ನಡುವೆ ಮಾತಿಗೆ ಮಾತು ಬೆಳೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ರಂಜಿತ್, ಸೀರೆಯಿಂದ ಪತ್ನಿಯ ಕುತ್ತಿಗೆ ಬಿಗಿದು ಹತ್ಯೆಗೈದಿದ್ದಾನೆ. ಬಳಿಕ ಇದೊಂದು ಆಕಸ್ಮಿಕ ಸಾವು ಎಂದು ನಂಬಿಸಲು ಸಂಚು ರೂಪಿಸಿದ್ದ ಆರೋಪಿ, ಮೃತದೇಹದ ಗುರುತು ವಿರೂಪಗೊಳಿಸಲು ಅಡುಗೆ ಮನೆಯಲ್ಲಿದ್ದ ಬಿಸಿ ಎಣ್ಣೆಯನ್ನು ಪತ್ನಿಯ ಮೃತದೇಹದ ಮೇಲೆ ಸುರಿದಿದ್ದಾನೆ. ಏನೂ ತಿಳಿಯದವನಂತೆ ಮನೆಯಿಂದ ಹೊರಗೆ ಹೋಗಿ ಸ್ವಲ್ಪ ಸಮಯದ ನಂತರ ವಾಪಸ್ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

​ಆದರೆ ದಂಪತಿ ನಡುವಿನ ನಿರಂತರ ಜಗಳದ ಬಗ್ಗೆ ಅನುಮಾನಗೊಂಡಿದ್ದ ಮನೆ ಮಾಲೀಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ್ದ ಮೈಕೋ ಲೇಔಟ್ ಪೊಲೀಸರು ಮೃತದೇಹದ ಸ್ಥಿತಿಯನ್ನು ಕಂಡು ಅನುಮಾನಗೊಂಡು ರಂಜಿತ್ ಕುಮಾರ್ ಗುಪ್ತಾನನ್ನು ವಶಕ್ಕೆ ಪಡೆದು ವಿಚರಿಸಿದಾಗ ಆತ ಸತ್ಯವನ್ನ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಮೈಕೋ ಲೇಔಟ್ ಪೊಲೀಸರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button