ಲಕ್ಷ್ಮೇಶ್ವರ: ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಅವ್ಯವಸ್ಥೆಯ ಆಗರ!

ವಾರ್ಡನ್ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ; ಕುರ್ಚಿ ಹೊರತಂದು ಪ್ರತಿಭಟನೆ – ಊಟ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಹಲವು ಸಮಸ್ಯೆಗಳ ಸರಮಾಲೆ

ಸ್ನೇಹಜೀವಿ ನ್ಯೂಸ್
ಪರಮೇಶ ಎಸ್ ಲಮಾಣಿ

ಲಕ್ಷ್ಮೇಶ್ವರ  ನ 20 : ಪಟ್ಟಣದ ದೇಸಾಯಿ ಬಣದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ಆಡಳಿತಾತ್ಮಕ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಊಟ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಹಲವು ಸಮಸ್ಯೆಗಳಿಂದ ಬೇಸತ್ತ ವಿದ್ಯಾರ್ಥಿಗಳು ಶುಕ್ರವಾರ ಬೆಳಿಗ್ಗೆ ವಾರ್ಡನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ವಾರ್ಡನ್ ಕುರ್ಚಿಯನ್ನು ಹೊರಗಡೆ ತಂದು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.

ವಸತಿ ನಿಲಯದಲ್ಲಿ ಸರಿಯಾದ ಊಟದ ವ್ಯವಸ್ಥೆಯಿಲ್ಲ, ಸಂಜೆಯ ಉಪಾಹಾರ ನೀಡುತ್ತಿಲ್ಲ, ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿಲ್ಲ, ಕೊಳೆತ ತರಕಾರಿಗಳಿಂದ ಅಡುಗೆ ಮಾಡಲಾಗುತ್ತಿದೆ ಎಂಬಿತ್ಯಾದಿ ಆರೋಪಗಳನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಸಮಸ್ಯೆಗಳನ್ನು ಪ್ರಶ್ನಿಸಿದರೆ ವಾರ್ಡನ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕುತ್ತಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ವಿದ್ಯಾರ್ಥಿಗಳಾದ ಇರ್ಫಾನ್ ಮಾಚೇನಹಳ್ಳಿ ಹಾಗೂ ದಾದಾಪೀರ್ ವಾಲಿಕಾರ ಮಾತನಾಡಿ, ಕಳೆದ ಒಂದು ವರ್ಷದಿಂದ ಸಂಜೆಯ ಉಪಾಹಾರ ನೀಡುತ್ತಿಲ್ಲ. ಕಂಪ್ಯೂಟರ್ ವ್ಯವಸ್ಥೆ ಇಲ್ಲ, ಪತ್ರಿಕೆ ತರಿಸಲು ಹಿಂದೇಟು ಹಾಕಲಾಗುತ್ತಿದೆ. ಕೊಬ್ಬರಿ ಎಣ್ಣೆ ನೀಡದೆ ಹಲವು ತಿಂಗಳುಗಳಾಗಿವೆ. ನೀರಿನ ಟ್ಯಾಂಕ್ ಗಬ್ಬೆದ್ದು ನಾರುತ್ತಿದ್ದು, ಆ ನೀರಿನಲ್ಲಿ ಸ್ನಾನ ಮಾಡಿದರೆ ಮೈಯೆಲ್ಲಾ ತುರಿಕೆ ಉಂಟಾಗುತ್ತಿದೆ. ಅಡುಗೆಗೆ ಕೊಳೆತ ತರಕಾರಿಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ವಾಷಿಂಗ್ ಮಷಿನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ ದುರಸ್ತಿ ಮಾಡಿಸಿಲ್ಲ. ಗ್ರಂಥಾಲಯದ ಪುಸ್ತಕಗಳನ್ನು ಟ್ರೆಜರಿಯಲ್ಲಿ ಇಡಲಾಗಿದ್ದು, ವಿದ್ಯಾರ್ಥಿಗಳಿಗೆ ಓದಲು ನೀಡುತ್ತಿಲ್ಲ. ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಇಲ್ಲದ ಸಮಯದಲ್ಲಿ ಭೇಟಿ ನೀಡುತ್ತಾರೆ. ವಿದ್ಯಾರ್ಥಿಗಳಿದ್ದಾಗ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುವ ಪ್ರಯತ್ನ ಮಾಡಿಲ್ಲ ಎಂದು ದೂರಿದರು.

ವಾರ್ಡನ್‌ಗೆ ಮೊಬೈಲ್ ಮೂಲಕ ಸಮಸ್ಯೆ ತಿಳಿಸಲು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಸಿಬ್ಬಂದಿಗಳು ಕರೆ ಮಾಡಿದರೆ ಮಾತ್ರ ಸ್ಪಂದಿಸುತ್ತಾರೆ. ಸಮಸ್ಯೆ ಹೇಳಿಕೊಂಡರೆ ಹೊರಗಡೆ ಬನ್ನಿ, ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಈ ಹಿಂದೆಯೂ ಹಲವು ವಿದ್ಯಾರ್ಥಿಗಳು ಇಲ್ಲಿನ ಅವ್ಯವಸ್ಥೆಯಿಂದಾಗಿ ವಸತಿ ನಿಲಯ ತೊರೆದು ಮನೆಗೆ ತೆರಳಿದ್ದಾರೆ. ಅವರು ವಸತಿ ನಿಲಯ ತೊರೆದಿದ್ದರೂ ಅವರ ಪ್ರವೇಶ ರದ್ದುಪಡಿಸಿಲ್ಲ. ಸಮಸ್ಯೆಗಳಿಂದ ಬೇಸತ್ತು ಗುರುವಾರದಿಂದ ಕೆಲವು ವಿದ್ಯಾರ್ಥಿಗಳು ಊಟವನ್ನೂ ಮಾಡಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಹನುಮಂತ ಹುರಳಿ, ಅಬ್ದುಲ್ ನದಾಫ್, ಅಜ್ಮಿರ್ ಶಿರಹಟ್ಟಿ, ವಿನೋದ ಮೈಲಾರಿ, ಮಹಾಂತೇಶ ಬಡ್ನಿ, ಹಸನಸಾಬ್ ನದಾಫ್, ಮಹಾಂತೇಶ ಕುರಿ, ಫಿರಸಾಬ್ ನದಾಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಮಾಡಿರುವ ಗಂಭೀರ ಆರೋಪಗಳ ಕುರಿತು ಪತ್ರಕರ್ತರು ವಾರ್ಡನ್ ರಾಜು ತಳವಾರ ಅವರನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡಲು ತಡವರಿಸಿದರು. ವಸತಿ ನಿಲಯದಲ್ಲಿ 40 ವಿದ್ಯಾರ್ಥಿಗಳ ಹಾಜರಾತಿ ಇದ್ದು, ಪ್ರಸ್ತುತ ಕೇವಲ 13ರಿಂದ 15 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಉಳಿದ ವಿದ್ಯಾರ್ಥಿಗಳು ಎಲ್ಲಿದ್ದಾರೆ ಎಂದು ಪ್ರಶ್ನಿಸಿದಾಗ ರಜೆ ಎಂದು ಉತ್ತರಿಸಿದರು. ರಜೆ ಪಡೆದಿರುವ ವಿದ್ಯಾರ್ಥಿಗಳ ಮಾಹಿತಿ ಹಾಗೂ ಹಾಜರಾತಿ ರಿಜಿಸ್ಟರ್ ತೋರಿಸುವಂತೆ ಕೇಳಿದಾಗ ತಾಲೂಕು ಅಧಿಕಾರಿಗಳಿಗೆ ನೀಡುತ್ತೇನೆ ಎಂದು ಹೇಳಿ ರಿಜಿಸ್ಟರ್ ತೋರಿಸಲು ಹಿಂದೇಟು ಹಾಕಿದರು.

       ಉಳಿದ ವಿದ್ಯಾರ್ಥಿಗಳ ಊಟಕ್ಕಾಗಿ ಬಳಸಬೇಕಾದ ಪಡಿತರ ಎಲ್ಲಿಗೆ ಹೋಗುತ್ತಿದೆ? ಪ್ರತಿದಿನದ ಬಯೋಮೆಟ್ರಿಕ್ ಹಾಜರಾತಿ ಪಟ್ಟಿ ಎಲ್ಲಿದೆ? ಎಂಬ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ದೊರೆಯಲಿಲ್ಲ. ವಿದ್ಯಾರ್ಥಿಗಳ ಮೂಲಭೂತ ಸಮಸ್ಯೆಗಳ ಕುರಿತು ಸ್ಪಷ್ಟನೆ ನೀಡಬೇಕಾದ ವಸತಿ ನಿಲಯದ ಆಡಳಿತವೇ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಶನಿವಾರ ಭೇಟಿ ನೀಡಿ ಸಮಸ್ಯೆ ಆಲಿಸುವೆ: ಅಮಿತ ಬಿದರಿ

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಅಮಿತ ಬಿದರಿ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ವಸತಿ ನಿಲಯದ ವಾರ್ಡನ್ ವಿದ್ಯಾರ್ಥಿಗಳೊಂದಿಗೆ ಸ್ನೇಹಪೂರ್ವಕವಾಗಿ ನಡೆದುಕೊಳ್ಳಬೇಕು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ಶನಿವಾರ ಖುದ್ದಾಗಿ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button