ಮೌಲಾನಾ ಅಬುಲ್ ಕಲಾಂ ಆಜಾದ್ – ಒಬ್ಬ ವ್ಯಕ್ತಿಯಲ್ಲ, ಅವರು ಶಿಕ್ಷಣ ಕ್ರಾಂತಿಯ ಸಂಕೇತ:

ಹಾಗೂ ಪ್ರತಿಯೊಬ್ಬ ನಾಗರಿಕನಿಗೂ ಗೌರವ ದೊರೆಯುವ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಸಂಕಲ್ಪ ಮಾಡಬೇಕು.

ಸ್ನೇಹಜೀವಿ ನ್ಯೂಸ್

ಬೆಂಗಳೂರು :ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ವತಿಯಿಂದ ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರು, ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಭಾರತ ರತ್ನ ಪುರಸ್ಕೃತ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮಜಯಂತಿ ಹಾಗೂ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದೆ.
ಮೌಲಾನಾ ಆಜಾದ್ ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿರಲಿಲ್ಲ. ಅವರು ದೂರದೃಷ್ಟಿಯುಳ್ಳ ಶಿಕ್ಷಣ ತಜ್ಞರು, ಶ್ರೇಷ್ಠ ಚಿಂತಕರು ಹಾಗೂ ದೇಶದ ಏಕತೆ ಮತ್ತು ಧರ್ಮಸೌಹಾರ್ದತೆಯ ಪ್ರತಿಪಾದಕರಾಗಿದ್ದರು. ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸುವ ಹೋರಾಟದಲ್ಲಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಮಹಾನ್ ರಾಷ್ಟ್ರಭಕ್ತರಾಗಿದ್ದರು.
ಸ್ವಾತಂತ್ರ್ಯಾನಂತರ ಭಾರತದ ಪ್ರಥಮ ಶಿಕ್ಷಣ ಸಚಿವರಾಗಿ ದೇಶದ ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ ಕೀರ್ತಿ ಮೌಲಾನಾ ಆಜಾದ್ ಅವರಿಗೆ ಸಲ್ಲುತ್ತದೆ. ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ, ವೈಜ್ಞಾನಿಕ ಸಂಶೋಧನೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳು ಅಪಾರ. ಭಾರತದ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ಅವರ ದೂರದೃಷ್ಟಿ ಮತ್ತು ಚಿಂತನೆಗಳು ಮಹತ್ವದ ಪಾತ್ರ ವಹಿಸಿವೆ.
ಮೌಲಾನಾ ಆಜಾದ್ ಅವರ ದೃಷ್ಟಿಯಲ್ಲಿ ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನವಲ್ಲ. ಅದು ವ್ಯಕ್ತಿಯನ್ನು ವಿಚಾರವಂತನನ್ನಾಗಿ, ಜವಾಬ್ದಾರಿಯುತ ನಾಗರಿಕನನ್ನಾಗಿ ಹಾಗೂ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಮಾನವೀಯ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿಯಾಗಿದೆ. ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು. ಬಡವ-ಶ್ರೀಮಂತ, ಜಾತಿ-ಧರ್ಮದ ಯಾವುದೇ ಭೇದವಿಲ್ಲದೆ ಎಲ್ಲರಿಗೂ ಸಮಾನ ಶೈಕ್ಷಣಿಕ ಅವಕಾಶಗಳು ಲಭ್ಯವಾಗಬೇಕು ಎಂಬುದು ಅವರ ಆಶಯವಾಗಿತ್ತು.
ಒಂದು ದೇಶದ ನಿಜವಾದ ಸಂಪತ್ತು ಅದರ ಭೂಮಿ, ಕಟ್ಟಡಗಳು ಅಥವಾ ಆರ್ಥಿಕ ಶಕ್ತಿಯಲ್ಲಿ ಮಾತ್ರ ಅಡಗಿಲ್ಲ. ಬದಲಾಗಿ ಆ ದೇಶದ ಜನರ ಜ್ಞಾನ, ಶಿಕ್ಷಣ, ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಮೌಲ್ಯಗಳಲ್ಲಿ ಅಡಗಿದೆ. ಈ ಮಹತ್ವದ ಚಿಂತನೆಯೇ ಮೌಲಾನಾ ಆಜಾದ್ ಅವರ ಶಿಕ್ಷಣದ ದೃಷ್ಟಿಕೋನದ ಮೂಲವಾಗಿತ್ತು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣದ ಬೆಳಕು ತಲುಪಿದಾಗ ಮಾತ್ರ ನಿಜವಾದ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಗತಿಯ ಆಶಯ ಸಾಕಾರಗೊಳ್ಳಲು ಸಾಧ್ಯ.
ಮೌಲಾನಾ ಆಜಾದ್ ಅವರ ಜೀವನದಿಂದ ನಾವು ಕಲಿಯಬೇಕಾದ ಮತ್ತೊಂದು ಮಹತ್ವದ ಪಾಠವೆಂದರೆ ಧರ್ಮಸೌಹಾರ್ದತೆ ಮತ್ತು ರಾಷ್ಟ್ರೀಯ ಏಕತೆ. ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವುದಕ್ಕಿಂತ, ಎಲ್ಲರೂ ಭಾರತೀಯರು ಎಂಬ ರಾಷ್ಟ್ರೀಯ ಭಾವನೆಯನ್ನು ಬಲಪಡಿಸಲು ಅವರು ನಿರಂತರವಾಗಿ ಶ್ರಮಿಸಿದರು. ಭಾರತದ ವೈವಿಧ್ಯತೆಯೇ ನಮ್ಮ ಶಕ್ತಿ. ಹಲವು ಧರ್ಮಗಳು, ಭಾಷೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಹೊಂದಿರುವ ನಾವು ಪರಸ್ಪರ ಗೌರವ, ಸಹಬಾಳ್ವೆ ಹಾಗೂ ಸಹೋದರತ್ವದ ಮೂಲಕ ಬಲಿಷ್ಠ ರಾಷ್ಟ್ರವನ್ನು ನಿರ್ಮಿಸಬೇಕು.
ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಮಾನ ಅವಕಾಶಗಳನ್ನು ಒದಗಿಸುವುದು ಕೇವಲ ಒಂದು ಇಲಾಖೆಯ ಜವಾಬ್ದಾರಿಯಲ್ಲ; ಅದು ಸಾಮಾಜಿಕ ನ್ಯಾಯದ ಆಶಯವನ್ನು ಸಾಕಾರಗೊಳಿಸುವ ನಮ್ಮೆಲ್ಲರ ಕರ್ತವ್ಯವಾಗಿದೆ. ಬಡತನದ ಕಾರಣದಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಪ್ರತಿಭೆ ಮತ್ತು ಸಾಮರ್ಥ್ಯವಿದ್ದರೂ ಆರ್ಥಿಕ ಸಂಕಷ್ಟದಿಂದ ಯಾವ ವಿದ್ಯಾರ್ಥಿಯೂ ತನ್ನ ಕನಸುಗಳನ್ನು ಕೈಬಿಡುವ ಪರಿಸ್ಥಿತಿ ನಿರ್ಮಾಣವಾಗಬಾರದು .
ಭಾರತದ ಸಂವಿಧಾನದ ಆಶಯಗಳನ್ನು ಕೇವಲ ಪುಸ್ತಕಗಳಲ್ಲಿ ಓದುವುದಕ್ಕೆ ಸೀಮಿತಗೊಳಿಸದೆ, ನಮ್ಮ ಆಡಳಿತ ಮತ್ತು ಸಾರ್ವಜನಿಕ ಜೀವನದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಸಾಮಾಜಿಕ ನ್ಯಾಯ, ಸಮಾನತೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಶಿಕ್ಷಣ ಅತ್ಯಂತ ಪ್ರಬಲ ಸಾಧನವಾಗಿದೆ. ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಬದುಕು ಮತ್ತು ಸಮಾನ ಅವಕಾಶ ದೊರೆತಾಗ ಮಾತ್ರ ಸಂವಿಧಾನದ ಆಶಯಗಳಿಗೆ ನಿಜವಾದ ಅರ್ಥ ಬರುತ್ತದೆ . ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಹಲವು ಜನಪರ ಕಾರ್ಯಕ್ರಮಗಳು ಹಾಗೂ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಗಳ ಪ್ರಯೋಜನಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕತೆ, ಬದ್ಧತೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದಾಗ ಮಾತ್ರ ಅವುಗಳ ಉದ್ದೇಶ ಸಾರ್ಥಕವಾಗುತ್ತದೆ.
ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಪ್ರತಿಪಾದಿಸಿದ ಶಿಕ್ಷಣದ ಮೌಲ್ಯಗಳು, ಧರ್ಮಸೌಹಾರ್ದತೆ, ಸಹಬಾಳ್ವೆ ಮತ್ತು ರಾಷ್ಟ್ರೀಯ ಏಕತೆಯ ಆದರ್ಶಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಅವರ ಆದರ್ಶಗಳನ್ನು ಕೇವಲ ಸ್ಮರಣೆಗೆ ಸೀಮಿತಗೊಳಿಸದೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಂದು ಮಗುವಿಗೂ ಶಿಕ್ಷಣ, ಪ್ರತಿಯೊಬ್ಬರಿಗೂ ಸಮಾನ ಅವಕಾಶ ಹಾಗೂ ಪ್ರತಿಯೊಬ್ಬ ನಾಗರಿಕನಿಗೂ ಗೌರವ ದೊರೆಯುವ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಸಂಕಲ್ಪ ಮಾಡಬೇಕು.
ಶಿಕ್ಷಣದ ಮೂಲಕ ಸಮಾನತೆ, ಜ್ಞಾನದ ಮೂಲಕ ಪ್ರಗತಿ ಹಾಗೂ ಸೌಹಾರ್ದತೆಯ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣವಾಗಲಿ. ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಸದಾ ಸ್ಫೂರ್ತಿಯಾಗಲಿ ಎಂದು ಈ ವೇಳೆ ಆಶಯ ವ್ಯಕ್ತಪಡಿಸಿದೆ.
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಯು. ಟಿ. ಖಾದರ್ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯ ರೆಡ್ಡಿ, ರಾಜ್ಯ ಸಭಾ ಸದಸ್ಯರಾದ ಮನ್ಸೂರ್ ಅಲಿ ಖಾನ್, ಶಾಸಕರಾದ ರಹೀಂ ಖಾನ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಶ್ರೀಮತಿ ಬಲ್ಕೀಸ್ ಬಾನು, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಸೈಯ್ಯದ್ ಮುಹಮ್ಮದ್ ಅಲಿ ಹುಸೈನಿ,ಹಜ್ ಸಮಿತಿಯ ಅದ್ಯಕ್ಷರಾದ ಝುಲ್ಫಿಕರ್ ಅಹ್ಮದ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ನಿಸಾರ್ ಅಹ್ಮದ್ , ರಾಜ್ಯ ಗ್ಯಾರಂಟಿ ಯೋಜನಾ ಅನುಷ್ಟಾನದ ಉಪಾಧ್ಯಕ್ಷರಾದ ಮೆಹ್ರೋಝ್ ಖಾನ್ , ಉಪಕುಲಪತಿಗಳಾದ ಸುಧೀರ್ ಕ್ರಷ್ಣಸ್ವಾಮಿ, ತರಬೇತುದಾರ ಮೊಹಮ್ಮದ್ ಮುನವ್ವರ್, ಸರ್ಕಾರದ ಕಾರ್ಯದರ್ಶಿಗಳಾದ ಸಲ್ಮಾ ಕೆ. ಫಾಹಿಮ್ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button